ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಲೇಖನ
Share
ದೊಡ್ಡ ಹೆಸರು ಮಾಡಿದ ಸಣ್ಣ ಸಾಮಗರು

ಲೇಖಕರು : ಕೆ೦ಡಸ೦ಪಿಗೆ
ಬುಧವಾರ, ಜುಲೈ 3 , 2013

ನಮ್ಮನ್ನಗಲಿದ 'ಸಣ್ಣ ಸಾಮಗ'ರದ್ದು ಯಕ್ಷಗಾನ ರಂಗದಲ್ಲಿ ದೊಡ್ಡ ಹೆಸರು. ಅದು ಹೇಗೆ ಎಂದು ಯಕ್ಷಗಾನದ ಹೊರಗಿನವರಿಗೆ ವಿವರಿಸುವುದು ಕಷ್ಟ. ಯಕ್ಷಗಾನ ಪ್ರೇಮಿಗಳಿಗೆ ಮಾತ್ರ 'ಸಾಮಗ' ಎಂಬ ಹೆಸರಷ್ಟೇ ಸಾಕು. ಬೇರೆ ವಿವರಣೆ ಅಗತ್ಯವಿಲ್ಲ. ಯಕ್ಷಗಾನದಲ್ಲಿ ಅವರೊದ್ದೊಂದು ವಿಶಿಷ್ಟ ಶೈಲಿ. ನೋಡಿ ಅನುಭವಿಸಿದರಷ್ಟೇ ತಿಳಿಯುವ ಒಂದು ವಿಭಿನ್ನ ಶೈಲಿ.

ಮಲ್ಪೆ ರಾಮದಾಸ ಸಾಮಗರು 'ಸಣ್ಣ ಸಾಮಗ' ಆಗಿದ್ದು ಅವರ ಅಣ್ಣ ದಿವಂಗತ ಮಲ್ಪೆ ಶಂಕರನಾರಾಯಣ ಸಾಮಗ ಅವರು ಯಕ್ಷಗಾನದಲ್ಲಿ 'ದೊಡ್ಡ ಸಾಮಗರಾಗಿದ್ದರು' ಎಂಬ ಕಾರಣಕ್ಕೆ. ಸಾಧನೆ ಇಬ್ಬರದ್ದು ದೊಡ್ಡದೇ. ಅವರದೇ ಆದ ರೀತಿಯಲ್ಲಿ.

ಸಣ್ಣ ಸಾಮಗರು ಯಕ್ಷಗಾನದಲ್ಲಿ ಹೆಸರು ಗಳಿಸಿದ್ದು ತಮ್ಮ ಮಾತುಗಾರಿಕೆಯ ಮೂಲಕ. ನಾಟ್ಯಕ್ಕೆ ಅಷ್ಟಕ್ಕಷ್ಟೇ ಪ್ರಾಮುಖ್ಯತೆ ನೀಡಿ ಮಾತಿನ ಮೂಲಕವೇ ಪ್ರಸಿದ್ಧಿಯ ಉತ್ತುಂಗಕ್ಕೆರಿದವರ ಒಂದು ಪರಂಪರೆಯೇ ಯಕ್ಷಗಾನದಲ್ಲಿ ಇದೆ. ಅಶು ಮಾತುಗಾರಿಕೆಯಿಂದ ರಂಗಸ್ಥಳದಲ್ಲಿ ಅದ್ಭುತವಾದ ಪಾತ್ರ ನಿರ್ಮಾಣ ಮಾಡಬಲ್ಲ ಇವರದ್ದು ಅದ್ಭುತ ಸಾಮರ್ಥ್ಯ.

ಶ್ರೀ ಶೇಣಿ ಗೋಪಾಲಕೃಷ್ಣ ಭಟ್ ಹಾಗೂ ರಾಮದಾಸ ಸಾಮಗರು
ಸಾಮಗರದ್ದು ಅವರ ಸಮಕಾಲೀನರಾದ ಇನ್ನೊಬ್ಬ ಮೇರು ಪ್ರತಿಭೆ ಶೇಣಿ ಗೋಪಾಲಕೃಷ್ಣ ಭಟ್ಟರಂತೆಯೇ ವಿದ್ವತ್ಪೂರ್ಣವಾದ ಅರ್ಥಗಾರಿಕೆ. ಆದರೂ ಇವರೀರ್ವರ ಶೈಲಿ ಸಂಪೂರ್ಣ ಬಿನ್ನ. ಶೇಣಿ ಮತ್ತು ದೊಡ್ಡ ಸಾಮಗರ ಅರ್ಥಗಾರಿಕೆಯಲ್ಲಿ ತರ್ಕ-ವಾದ ಪ್ರಧಾನವಾಗಿದ್ದರೆ ಸಣ್ಣ ಸಾಮಗರ ಅರ್ಥಗಾರಿಕೆಯಲ್ಲಿ ಕಾವ್ಯವಿರುತಿತ್ತು. ಭಾವ ಇರುತಿತ್ತು. ಈ ಮೂವರು ಮೂಲತಃ ಹರಿದಾಸರಾಗಿದ್ದು ನಂತರ ಯಕ್ಷಗಾನಕ್ಕೆ ಬಂದವರು. ಶೇಣಿಯವರ ಅರ್ಥಗಾರಿಕೆಯಲ್ಲಿ ಹೇರಳವಾಗಿ ಕಂಡುಬರುವ ಅಪೂರ್ವವಾದ ಒಳ ನೋಟಗಳು ಸಾಮಗರ ಅರ್ಥಗಾರಿಕೆಯಲ್ಲಿ ವಿರಳ. ಆದರೆ ಸಾಮಗರ ಅರ್ಥಗಾರಿಕೆಯಲ್ಲಿ ಅಪಾರವಾದ ವಿಷಯ ಸಂಗ್ರಹ ಇರುತ್ತಿತ್ತು. ತತ್ವಶಾಸ್ತ್ರ, ವೇದ, ಉಪನಿಷತ್ ಮತ್ತು ಪುರಾಣಗಳ ಸಾರವನ್ನು ಸಲೀಸಾಗಿ ತಮ್ಮ ಅರ್ಥಗಾರಿಕೆಯಲ್ಲಿ ಬಳಸಿಕೊಂಡು ಅವರು ಪೌರಾಣಿಕ ಪಾತ್ರಗಳನ್ನು ರಂಗಸ್ಥಳದಲ್ಲಿ ಅಥವಾ ತಾಳಮದ್ದಲೆಯ ಕೂಟಗಳಲ್ಲಿ ನಿರೂಪಿಸುತಿದ್ದ ರೀತಿ ಅನನ್ಯವಾಗಿತ್ತು. ಆದರೆ ವೇಗ ಗತಿಯಲ್ಲಿ ಸಾಗುವ ಅರ್ಥಗಾರಿಕೆ ಮೊದಮೊದಲಿಗೆ ಕೇಳುವವರಿಗೆ ಅರಗಿಸಿಕೊಳ್ಳುವುದು ಸ್ವಲ್ಪ ಕಷ್ಟ. ಆದರೆ ಒಮ್ಮೆ ಅದಕ್ಕೆ ಹೊಂದಿಕೊಂಡರೆ ಮತ್ತೆ ಮತ್ತೆ ಕೇಳಬೇಕೆನಿಸುವ ಆಕರ್ಷಣೆ. ಕೆಲವೊಮ್ಮೆ ಅವರ ಅರ್ಥ ಕೇಳುತ್ತಿದ್ದರೆ ವ್ಯಾಕರಣದ ತರಗತಿಯಲ್ಲಿ ಕುಳಿತ ಅನುಭವ ಆಗುವುದು ಇತ್ತು.

ಸಣ್ಣ ಸಾಮಗರು ಭಾವನಾತ್ಮಕವಾಗಿ ಅರ್ಥ ಹೇಳ ಹೊರಟರೆ ನೋಟಕರ ಕಣ್ಣಾಲಿಗಳು ಒದ್ದೆಯಾಗಲೇ ಬೇಕು. ಕೈಕೇಯಿಯ ಮುಂದೆ ಗೋಗರೆಯುವ ದಶರಥ, ಸೀತೆಯನ್ನು ಕಳೆದುಕೊಂಡು ಪರಿತಪಿಸುವ ರಾಮ, ಹೆತ್ತ ತಾಯಿಂದಲೇ ವಂಚನೆಗೊಳಗಾದ ಕ್ಷಣವನ್ನು ಅರಗಿಸಿಕೊಳ್ಳುವ ಕರ್ಣ ಮುಂತಾದ ಅವರ ಭಾವನಾತ್ಮಕ ಪಾತ್ರಗಳನ್ನು ಮರೆಯುವುದಾದರೂ ಹೇಗೆ? ಎಂತಹ ಭಾವನಾತ್ಮಕ ಸನ್ನಿವೇಶಗಳನ್ನೂ ಯಾವುದಾದರೂ ಉದಾಹರಣೆಗಳ ಮೂಲಕ ಅಥವಾ ಪ್ರತಿಮೆಗಳ ಮೂಲಕ ನಿರೂಪಿಸುವುದು ಸಾಮಗ ಶೈಲಿಯ ಒಂದು ಪ್ರಮುಖ ಅಂಶ. ಅತಿರಥನ ಪಾತ್ರದಲ್ಲಿ ವಸುಷೇಣ (ಬಾಲಕ ಕರ್ಣ)ನ ಜತೆಗೆ ಅವರ ಸಂಭಾಷಣೆ. ವಸುಷೇಣ ತಾನು ಬಿಲ್ಲು ವಿದ್ಯೆ ಕಲಿಯಬೇಕು ಎಂದು ಕೇಳಿಕೊಂಡಾಗ ಮೊದಲಿಗೆ ಅತಿರಥ ಅದು ನಮ್ಮಂತ ಸೂತರಿಗೆ ಕೈಗೆಟಕುವ ವಿದ್ಯೆ ಅಲ್ಲ. ವೃಥಾ ಹಠ ಮಾಡಬೇಡ ಎಂದು ತಿಳಿ ಹೇಳುತ್ತಾನೆ. ವಸುಷೇಣ ಮತ್ತೂ ಹಠ ಮಾಡುತ್ತಾನೆ. ಆಗ ಸಾಮಗರ ಅತಿರಥ ಕಣ್ಣೀರು ಒರೆಸುತ್ತಾ ಹೇಳುವ ಒಂದೇ ವಾಕ್ಯದ ಸ್ವಗತ ಹೀಗಿದೆ:: ‘ಕೊಳ್ಳಿಯನ್ನು ಕೆಳಮುಖವಾಗಿ ಹಿಡಿಯಬಹುದು. ಆದರೆ ಕೊಳ್ಳಿಯ ಬೆಂಕಿ ಕೆಳಮುಖವಾಗಿ ಉರಿದೀತೆ?'. ಅವರ ಆಳವಾದ ಪಾಂಡಿತ್ಯವನ್ನು ಸಂಪೂರ್ಣವಾಗಿ ಬಳಸಿಕೊಂಡ ಪಾತ್ರಗಳ ಪೈಕಿ ಯಕ್ಷಪ್ರಶ್ನೆಯ ಧರ್ಮರಾಜ ಮತ್ತು ಗೀತೋಪದೇಶದ ಕೃಷ್ಣ ಪ್ರಮುಖವಾದುವುಗಳು.
ರಾಮದಾಸ ಸಾಮಗರು ಹಾಗೂ ಕೋಳ್ಯೂರು ರಾಮಚ೦ದ್ರ ರಾವ್.


ಕನ್ನಡ ಮತ್ತು ಸಂಸ್ಕೃತ ಭಾಷೆಗಳಲ್ಲಿ ಪಾಂಡಿತ್ಯ ಹೊಂದಿದ್ದ ಸಾಮಗರು ತುಳು ಯಕ್ಷಗಾನಕ್ಕೆ ನೀಡಿದ ಕೊಡುಗೆ ಕೂಡ ವಿಶಿಷ್ಟವಾದದ್ದು. ತುಳು ಭಾಷೆ ಮತ್ತು ತುಳು ಯಕ್ಷಗಾನಕ್ಕೊಪ್ಪುವ ವೇಷಗಳನ್ನವರು ಸೊಗಸಾಗಿ ನಿರೂಪಿಸುತ್ತಿದ್ದರು. 1979ರಲ್ಲಿ ಜಯಭೇರಿ ಭಾರಿಸಿದ ಕರ್ನಾಟಕ ಮೇಳದವರ 'ಪಟ್ಟದ ಪದ್ಮಲೆ' ಎಂಬ ಯಕ್ಷಗಾನದಲ್ಲಿ ಒಂದು ವಿಶೇಷ ಸನ್ನಿವೇಶವಿದೆ. ಅದರಲ್ಲಿ ಚಂದ್ರವರ್ಮ ಎಂಬ ಅರಸ, ನಾಗು ಅನ್ನುವ ವೇಶ್ಯೆಯ ಜತೆ ಪತಿವ್ರತಾ ಧರ್ಮದ ಬಗ್ಗೆ ಸುಧೀರ್ಘ ಚರ್ಚೆ ನಡೆಸುತ್ತಾನೆ. ಚಂದ್ರವರ್ಮನಾಗಿ ಸಾಮಗರು. ನಾಗುವಿನ ಪಾತ್ರದಲ್ಲಿ ಅಪ್ರತಿಮ ಸ್ತ್ರೀವೇಷಧಾರಿ ಕೋಳ್ಯೂರು ರಾಮಚಂದ್ರ ರಾವ್. ಸದಾ ರಂಗದಲ್ಲಿ ದಂಪತಿಗಳ ಪಾತ್ರದಲ್ಲಿ ಕಾಣಿಸಿಕೊಳ್ಳುತಿದ್ದ ಸಾಮಗ-ಕೋಳ್ಯೂರು ಜೋಡಿ 'ಪಟ್ಟದ ಪದ್ಮಲೆಯಲ್ಲಿ' ಈ ರೀತಿ ಕಾಣಿಸಿಕೊಂದದ್ದೇ ಒಂದು ವಿಶೇಷ. ಸುಮಾರು ಒಂದು ಒಂದೂವರೆ ಘಂಟೆಗಳ ಕಾಲ ಅರಸ-ವೇಶ್ಯೆಯರ ವಾದ-ಪ್ರತಿವಾದ ಸಾಗುತ್ತದೆ. ವೇಶ್ಯೆ ಪಂಚಪತಿವ್ರತೆಯರ ಅರ್ಹತೆಯನ್ನು ಪ್ರಶ್ನಿಸುತ್ತಾಳೆ. ಅವರಿಗೆ ಪತಿವ್ರತಾ ಪಟ್ಟ ನೀಡಿದ ವ್ಯವಸ್ಥೆಯನ್ನು ಖಂಡಿಸುತ್ತಾಳೆ. ಅರಸ ಪತಿವ್ರತೆಯರನ್ನು ಸಮರ್ಥಿಸುತ್ತಾ ಸಾಗುತ್ತಾನೆ ತುಳು ಯಕ್ಷಗಾನ ಪ್ರಸಂಗಗಳ ಚರಿತ್ರೆಯಲ್ಲೇ 'ಪಟ್ಟದ ಪದ್ಮಲೆ' ಯ ಈ ಸನ್ನಿವೇಶ ಒಂದು ಅದ್ಬುತ. ತತ್ವಶಾಸ್ತ್ರ ಮತ್ತು ಪುರಾಣಗಳ ಆಧಾರದಿಂದ ಸಾಮಗರು ಕೋಳ್ಯೂರು ಅವರ ವಾದಗಳನ್ನು ಖಂಡಿಸುತ್ತಾ, ಪ್ರತಿವಾದ ಮಂಡಿಸುತ್ತಾ ಸಾಗುತ್ತಿದ್ದಂತೆ ರಂಗದ ಮೇಲೆ ಪತಿವ್ರತಾ ಧರ್ಮಕ್ಕೆ ಒಂದು ಹೊಸ ಭಾಷ್ಯ ಬರೆಯಲ್ಪಡುತ್ತಿತ್ತು. ಪ್ರೇಕ್ಷಕರಿಗೆ ಒಂದು ಕ್ಷಣ ತಾವು ನೋಡುತ್ತಿರುವುದು ತುಳು ಯಕ್ಷಗಾನವನ್ನೋ ಅಥವಾ ಯಾವುದೊ ಭವ್ಯವಾದ ಪೌರಾಣಿಕ ಪ್ರಸಂಗವನ್ನೂ ಎಂಬ ಸಂಶಯ ಮೂಡುತ್ತಿತ್ತು. ಮುಂದೆ ಎಂದಿಗೂ ಮರುಕಳಿಸಲು ಅಸಾಧ್ಯವಾಗಿರುವ ತುಳು ಯಕ್ಷಗಾನ ರಂಗದ ಸುವರ್ಣ ಸನ್ನಿವೇಶ ಅದು.

ಮುಂದಿನ ವರ್ಷ ಕರ್ನಾಟಕ ಮೇಳದವರು ಆರಿಸಿಕೊಂಡ ದಾಖಲೆ ಗಳಿಕೆಯ ಪ್ರಸಂಗ ತುಳು ‘ಕಾಡಮಲ್ಲಿಗೆ' ಯಲ್ಲಿ ಮತ್ತೆ ಸಾಮಗ-ಕೋಳ್ಯೂರು ಜೋಡಿ ಮತ್ತೆ ಕಾಣಿಸಿಕೊಂಡಿತು. ಸಾಮಗರದ್ದು ಉದ್ಯಾವರದ ಅರಸ ಉದಯವರ್ಮನ ಪಾತ್ರ. ಅರಸನ ಎರಡನೆಯ ಪತ್ನಿ ಬೊಮ್ಮಕ್ಕೆಯ ಪಾತ್ರದಲ್ಲಿ ಕೋಳ್ಯೂರು. ತನ್ನ ಮೊದಲನೆಯ ಪತ್ನಿಯ ದುರಂತ ಸಾವಿನ ನಂತರ ವೈರಾಗ್ಯಕ್ಕೆ ಒಳಗಾಗುವ ಉದಯವರ್ಮನ ಪಾತ್ರ ಸಾಮಗರನ್ನು ಬಿಟ್ಟರೆ ಬೇರೆ ಯಾರಿಗೂ ಅಷ್ಟು ಸೊಗಸಾಗಿ ಮಾಡುವುದಕ್ಕೆ ಇನೂ ಸಾಧ್ಯವಾಗಿಲ್ಲ.. ಎರಡನೆಯ ಪತ್ನಿ ಮತ್ತು ಆಕೆಯ ತಮ್ಮ ಬೀರಣ್ಣ ಬಲ್ಲಾಳನಿಂದ ಕಿರುಕುಳಕ್ಕೆ ಒಳಗಾಗುವ ಉದಯವರ್ಮ (ಸಾಮಗರು) ಜೀವನದ ನಿರರ್ಥಕತೆಯ ಬಗ್ಗೆ ಅರಮನೆಯ ಆಳು ಚೊಂಕ್ರನ (ಹಾಸ್ಯಗಾರ ಮಿಜಾರು ಅಣ್ಣಪ್ಪ) ಅವರ ಜತೆ ನಡೆಸುವ ಮಾತುಕತೆ ಇಡೀ ಸಭೆಗೆ ಸಭೆಯೇ ತಲೆದೂಗುವಂತೆ ಮಾಡುತಿತ್ತು. ಬಹುಶಃ ಈ ಪಾತ್ರವನ್ನು ಸಾಮಗರನ್ನು ದೃಷ್ಟಿಯಲ್ಲಿ ಇಟ್ಟುಕೊಂಡೇ ಕತೆಯಲ್ಲಿ ಅಳವಡಿಸಿರಬೇಕು.

ಅರವತ್ತರ ದಶಕದಲ್ಲಿ ಸಾಮಗರು ಆ ಕಾಲದ ಜನಪ್ರಿಯ ತುಳು ಪ್ರಸಂಗಗಳಾದ ಕೋಟಿಚೆನ್ನಯ್ಯ, ತುಳುನಾಡ ಸಿರಿ, ದೇವುಪೂಂಜ ಪ್ರತಾಪ ಮುಂತಾದ ಪ್ರಸಂಗಗಳಲ್ಲಿ ಶ್ರೇಷ್ಠ ಅಭಿನಯ ನೀಡಿದ್ದರಂತೆ. ಹಲವಾರು ಟೀಕೆಗಳಿಗೆ ತುತ್ತಾಗಿದ್ದ ತುಳು ಯಕ್ಷಗಾನ ಕ್ಷೇತ್ರಕ್ಕೆ ಒಂದು ಮಟ್ಟಿನ ಗೌರವದ ಸ್ಥಾನ-ಮಾನ ಗಳಿಸಿಕೊಡುವಲ್ಲಿ ಸಾಮಗರ ಕೊಡುಗೆ ಅಸಾಮಾನ್ಯವಾದುದು.

ಇಂದು ಪ್ರೇಕ್ಷಕರ ಕೊರತೆಯಿಂದ ಯಕ್ಷಗಾನ ರಂಗ ಸೊರಗುತ್ತಿದೆ ಎಂಬ ಮಾತು ಕೇಳಿಬರುತ್ತಿದೆ. ಆದರೆ ವಾಸ್ತವದಲ್ಲಿ ಯಕ್ಷಗಾನ ಸೊರಗುತ್ತಿರುವುದು ಪ್ರೇಕ್ಷಕರ ಕೊರತೆಯಿಂದಲ್ಲ. ಉತ್ತಮ ಕಲಾವಿದರ ಕೊರತೆಯಿಂದ. ಸಾಮಗರಂಥಹ ಹಳೆಯ ತಲೆಮಾರಿನ ಕಲಾವಿದರೆಲ್ಲ ಒಬ್ಬೊಬ್ಬರಾಗಿ ಮರೆಯಾಗುತ್ತಿದ್ದಂತೆ ಯಕ್ಷಗಾನ ರಂಗವನ್ನು ಒಂದು ದೊಡ್ಡ ಶೂನ್ಯ ಆವರಿಸಿಕೊಳ್ಳುತ್ತಿದೆ. ತುಂಬಲಾರದ ನಷ್ಟ ಎಂಬ ಶಬ್ದ ಇಲ್ಲಿ ಖಂಡಿತವಾಗಿಯೂ ಕ್ಲೀಷೆಯಲ್ಲ.





ಕೃಪೆ : http://kendasampige.com


Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ




ಪೂರಕ ಲೇಖನಗಳು
 



ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ